ಜೀ ಟಿ.ವಿ.ಯಲ್ಲಿ ಗಜಕೇಸರಿ ಕೃಷ್ಣ ನಿರ್ದೇಶನದ ಗೃಹಲಕ್ಷ್ಮಿ
Posted date: 02 Tue, Jun 2015 – 08:39:55 AM

ಮುಂಗಾರು ಮಳೆ ಚಿತ್ರದ ಛಾಯಾಗ್ರಾಹಕ, ಯಶ್ ಅಭಿನಯದ ಗಜಕೇಸರಿ ನಿರ್ದೇಶಕ ಕೃಷ್ಣ ಮೊದಲಬಾರಿಗೆ ಕಿರುತೆರೆ ಧಾರಾವಾಹಿ ನಿರ್ದೇಶಿಸುತ್ತಿದ್ದಾರೆ. ಅವರ ಪ್ರಧಾನ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಗೃಹಲಕ್ಷ್ಮಿ ಜೀ ಕನ್ನಡ ವಾಹಿನಿಯಲ್ಲಿ ಇದೇ ಜೂನ್ ೮ ರಿಂದ ಸಂಜೆ ೬:೩೦ರಿಂದ ೭ ಗಂಟೆವರೆಗೆ ಪ್ರಸಾರವಾಗಲಿದೆ.
     ನಟಿ ಸ್ವಪ್ನ ಕೃಷ್ಣ ಆರ್.ಆರ್.ಆರ್ ಕ್ರಿಯೇಷನ್ಸ್ ಮೂಲಕ  ಈ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಗಿರೀಶ್‌ಕುಮಾರ್ ಜಿ.ಎನ್ ಸಂಚಿಕೆ ನಿರ್ದೇಶಕರಾಗಿದ್ದು, ಸೆಲ್ವಂ ಚಿತ್ರಕಥೆ ಬರೆಯುತ್ತಿದ್ದಾರೆ.  ಈ ಧಾರಾವಾಹಿಯನ್ನು ರೆಡ್ ಎಪಿಕ್ ಕ್ಯಾಮೆರಾದಲ್ಲಿ ಚಿತ್ರೀಕರಿಸಲಾಗಿದ್ದು, ದಕ್ಷಿಣ ಭಾರತದಲ್ಲೇ ಮೊದಲಬಾರಿಗೆ ಸಂಪೂರ್ಣವಾಗಿ  ಕ್ಯಾಮೆರಾದಲ್ಲಿ ಚಿತ್ರೀಕರಣಗೊಳ್ಳುತ್ತಿರುವ  ಧಾರಾವಾಹಿ ಎಂಬ ಹೆಗ್ಗಳಿಕೆ ಗೃಹಲಕ್ಷ್ಮಿಯದ್ದಾಗಿದೆ.
    ಶ್ರೀರಸ್ತು ಶುಭಮಸ್ತು, ಜೊತೆಜೊತೆಯಲಿ, ಶುಭವಿವಾಹ, ಲವ್‌ಲವಿಕೆ, ರಂಗೇಗೌಡ ಮತ್ತು ಒಂದೂರ‍್ನಲ್ಲಿ ರಾಜರಾಣಿ ಯಂತಹ ವಿನೂತನ ಶೈಲಿಯ ಧಾರಾವಾಹಿಗಳನ್ನು ಕನ್ನಡಿಗರಿಗೆ ನೀಡಿದ ಜೀ ವಾಹಿನಿ ಈಗ  ಮತ್ತೊಂದು ಕೌಟುಂಬಿಕ ಧಾರಾವಾಹಿಯನ್ನು  ವೀಕ್ಷಕರ ಮುಂದೆ ತರುತ್ತಿದೆ.
     ಗೃಹಲಕ್ಷ್ಮಿ ಗಂಡ-ಹೆಂಡತಿ ಮತ್ತು ಮೂವರು ಮಕ್ಕಳ ನೆಮ್ಮದಿಯುತ  ಕುಟುಂಬದ ಕಥೆ. ಕುಟುಂಬದ ಒಡತಿಯ ಹೆಸರೇ ಲಕ್ಷ್ಮಿ. ಈಕೆ ಆ ಮನೆಯ ಸಂಪತ್ತು. ಆರ್ಕಿಟೆಕ್ಟ್ ಆದ, ಕಟ್ಟಡ ನಿರ್ಮಾಣ ಕಂಪನಿಯ ಒಡೆಯ ರಾಘವ ಹಾಗೂ ಪಿಯುಸಿ ಓದಿ ಮಧ್ಯಮ ಕುಟುಂಬದಿಂದ ಬಂದು ಗಂಡನ ಜತೆ ನೆಲೆಸಿರುವ ಲಕ್ಷ್ಮಿ ಆದರ್ಶ ದಂಪತಿಗಳು. ಇವರಿಗೆ ಮೂವರು ಮಕ್ಕಳು ಐಶ್ವರ್ಯ, ಅನಿರುದ್ಧ ಮತ್ತು ಅದಿತಿ. ಜತೆಗೆ ರಾಘವನ ಅಮ್ಮ ಮಂಗಳಮ್ಮ ಕೂಡಾ ಮನೆಯಲ್ಲಿರುತ್ತಾರೆ. ಎಲ್ಲರಿಗೂ ಲಕ್ಷ್ಮಿ ಅಂದ್ರೆ ಪಂಚಪ್ರಾಣ. ಲಕ್ಷ್ಮಿಯೂ ತನ್ನ ದಿನಚರಿಯನ್ನೆಲ್ಲ ಈ ಮನೆಯವರಿಗಾಗಿ ಮೀಸಲಿಟ್ಟಿದ್ದಾಳೆ. ಅವಳು ಡ್ರೈವಿಂಗ್ ಕಲಿಯೋದು ಮಕ್ಕಳನ್ನ ಸ್ಕೂಲಿಗೆ ತಲುಪಿಸೋದಕ್ಕಾಗಿ, ಅವಳು ಇಂಗ್ಲಿಷ್ ಕಲಿಯೋದು ಮಕ್ಕಳ ಹೋಮ್‌ವರ್ಕ್‌ನಲ್ಲಿ ನೆರವಾಗುವುದಕ್ಕಾಗಿ. ಹೀಗೆ ತನ್ನ ಕುಟುಂಬದ ಆಗು-ಹೋಗು ಮತ್ತು ಸುಖ ದುಃಖಗಳಿಗೆ ಅಗತ್ಯಕ್ಕಿಂತ ಹೆಚ್ಚಾಗಿ ಸ್ಪಂದಿಸುವ ಲಕ್ಷ್ಮಿ ಮೇಲೇ ಗಂಡ ಮತ್ತು ಮಕ್ಕಳು ಹೆಚ್ಚು ಅವಲಂಬಿತರಾಗಿರುತ್ತಾರೆ. ಆದರೆ ಈಕೆಯ ಮನಸಲ್ಲೇನೋ ಒಂದು ದೊಡ್ಡ ಕೊರಗಿದೆ. ಅದು ಏನು? ಅದರಿಂದ ಆಕೆ  ಪಾರಾಗಿ ಬರ‍್ತಾಳಾ, ಬರೋದಾದರೆ ಹೇಗೆ? ಆ ಪ್ರಯಾಣದಲ್ಲಿ ಅವಳ ಕಷ್ಟಸುಖಗಳಿಗೆ ಜತೆಯಾಗೋರು ಯಾರ‍್ಯಾರು ಅನ್ನೋದೇ ಕತೆಯ ಮುಖ್ಯ ಎಳೆಯಾಗಿದೆ.
     ನಿರೂಪಕಿಯಾಗಿ ಗುರುತಿಸಿಕೊಂಡಿರುವ ಸನಾತಿನಿ ಲಕ್ಷ್ಮಿಯಾಗಿ ಅಭಿನಯಿಸುತ್ತಿದ್ದು, ಚಂದ್ರು ಬಿ. ಅಮಿತ್, ಮೋನಿಶಾ ಶ್ರೇಯಾ ಮತ್ತು ಹಿರಿಯ  ನಟಿ ಜಯಮ್ಮ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.  ಸಾವಿರ ಸಂಚಿಕೆಗಳನ್ನು ಪೂರೈಸಿರುವ ರಾಧಾ ಕಲ್ಯಾಣ ಮುಕ್ತಾಯವಾಗುತ್ತಿದ್ದು, ಈ ಹೊಸ ಧಾರಾವಾಹಿ ಅದೇ ಸಮಯದಲ್ಲಿ  ಪ್ರಸಾರವಾಗಲಿದೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed